Monday, May 23, 2011

ಹಸಿಯಾದ ಕಾಗದ; ಒಲವ ಶೋಕ ಪತ್ರ

ನಿನ್ನ ಪ್ರೀತಿಗೆ ನನ್ನಲಿ ಬೆಲೆ ಇಲ್ಲದಂತಾಯಿತು
ನಿನ್ನೊಲವಿಗೆ ನಾ ತಣ್ಣೀರೆರೆಚಿದಾಯಿತು
ಏಕೆ ಇಷ್ಟಾದರು ಪ್ರೀತಿಸುತಿವೆ ನನ್ನನು?
ನನ್ನಲಿ ಅಂತಹದು ಇರುವುದಾದರು ಏನು?
ಪ್ರೀತಿಗೆ ಹೃದಯದಲಿ ಗುಡಿ ಇಲ್ಲ
ಬರಿಯ ಸ್ಮಶಾಣವೆ ಎಲ್ಲ!
ನಿನ್ನೊಲವ ಪಡೆವ ಅದೃಷ್ಟವ ಪಡೆದಿಲ್ಲ ನಾ
ಮರೆತುಬಿಡು, ಸಾಧ್ಯವಾದರೆ ಕ್ಷಮಿಸಿಬಿಡು

ಗೆಳೆಯ-ಗೆಳತಿಯರಿಬ್ಬರು, ಹೆಚ್ಚು ಪ್ರೀತಿ, ವಾತ್ಸಲ್ಯ, ಮಮತೆ ತೋರಿದರೆ ಅದೋ ಪ್ರೀತಿಯ ಮೊಳಕೆ ಚಿಗುರೊಡೆಯುವುದು! ಕೊಂಚ ಕೋಪ, ಕೊಂಚ ನಗು, ಸ್ವಲ್ಪ ತಲಹರಟೆ. ನಡುವೆಯೆ ನುಸುಳಿ ನುಸುಳಿ ಹೋಗುವ ಹುಸಿ ಮುನಿಸು. ಇದೆ ನೋಡು ಮಾರ್ಪಟ್ಟಿದೆ ಸ್ನೇಹ ಪ್ರೀತಿಗೆ!


ಆದರೆ ನನ್ನಲಿ ನಿನ್ನ ಒಲವ ಬಯಸುವ ಯಾವ ಅರ್ಹತೆಯೂ ಇಲ್ಲ. ಏಕೆಂದರೆ ನನ್ನಲಿ ಪ್ರೀತಿಗೆ ಯಾವ ಜಾಗವೂ ಇಲ್ಲ! ಇಷ್ಟಾದರೂ ಪ್ರೀತಿಸುತಿರುವೆನೆಂಬ ನಂಬಿಕೆ! ಆದರೆ ಒಪ್ಪಲಾಗದ ಕಹಿ ಸತ್ಯವದು.!ಏಕೆ? ಅದೋ ಮರೀಚಿಕೆ! ನಿನ್ನ ಪ್ರತಿ ಮಾತು, ನಿನ್ನ ನಗು, ಆ ನಿನ್ನ ತುಂಟತನ ಎಲ್ಲವೂ ಅತಿ ಮಧುರ. ಆದರೆ ಅದು ಕೇವಲ ನೆನಪಿನಲ್ಲಿ ಅಮರ! ಒಂದೆಡೆ ಪ್ರೀತಿ, ಒಂದೆಡೆ ಕುಟುಂಬ! ಒಪ್ಪದಿದ್ದರೆ ಈ ಪ್ರೀತಿಯ, ಮೇಲೇರುವುದು "ಎರಡರಲ್ಲಿ ಯಾವುದು ಅತಿ ಮುಖ್ಯ?" ಎಂಬ ಯಕ್ಷ ಪ್ರಶ್ನೆ! ಎನೆಂದು ಉತ್ತರಿಸಲಿ ಅಂದು? ನೀನೋ? ಅವರೋ?
ಇದೇ ಕಾರಣಕ್ಕೆ ಇಂದು ಮನ ರೋಧಿಸುತಿದೆ. ಮುಂದೆ ಆಗುವ ಈ ಕಾರ್ಯಕ್ಕೆ ಅಂತ್ಯವಾಡಬೇಕಿದೆ ಇಂದೆ! ಸಾವರಿಸಿಕೊಂಡು ಹೇಳುತಿರುವೆನು ನಿನ್ನ ಪ್ರೀತಿ ನನಗೆ ಬೇಡವೆಂಬ ಸುಳ್ಳನ್ನು! ಎನ್ನ ಸಂತೋಷಕ್ಕೆ ಇತರರ ನೋಯಿಸೆನು. ಅದಕ್ಕೆ ನನಗೆ ನಾನೇ ಮೋಸ ಮಾಡಿಕೊಳ್ಳುತಿರುವೆನು!


ಮನ ಬಿಕ್ಕಳಿಸಿ ಬಿಕ್ಕಳಿಸಿ ಅಳುತಿದೆ ಕಣೋ. ಕಣ್ಣೀರಲ್ಲಿ ಮಿಂದಿರುವ ಕಣ್ಣಿಗೆ ಎಲ್ಲವೂ ಮಂಜು ಮಂಜು! ಎಡಗೈಯಲಿ ರಕ್ತದ ಕಲೆ, ಬಲಗೈಯಲಿ ಕಣ್ಣೀರಿನ ಹನಿ, ಮನದಲಿ ಉರಿದುರಿದು ಸುಡುತಿರುವ ಚಿತೆ! ಎನೆಂದರೂ ತಡೆಯಲಾಗುತಿಲ್ಲ ಆ ಭಾಷ್ಪಾಂಜಲಿಯ! ಕಣ್ಣೀರಿನ ಈ ಮಳೆಗೆ ಕಾಗದವೂ ಹಸಿಹಸಿಯಾಗುತಿದೆ. ಶಾಯಿಯ ಅಕ್ಷರಗಳೆಲ್ಲವು ಹರಡುತಿವೆ.ಹಾಳೆಯು ಹರೆದು ಹೋಗುವ ಸ್ಥಿತಿಯ ತಲುಪಿದೆ. ಗಟ್ಟಿ ಮನಸ್ಸೇ ಇಂದು ಈ ಕಂಬನಿಯಲಿ ನೆನೆದು ಸೊರಗುತಿದೆ ಇನ್ನು ಈ ತಿಳಿ ಹಾಳೆಯ ತಪ್ಪೇನು!?


ನನ್ನ ಮನಸ್ಸಿನಲ್ಲಿರುವುದ, ನಿನ್ನ ಪ್ರೀತಿಗೆ ನನ್ನ ಇಚ್ಛೆ ಕೊಡಲಾಗದಿರುವುದ, ನಿನಗೆ ನೇರವಾಗಿ ಹೇಳಲಾಗದೆ ಈ ಪತ್ರದ ಮೂಲಕೆ ಹೇಳುವ ಬಯಕೆಯಾಯಿತು. ಆದರೆ, ಬಳಿಕ ನಿನ್ನಲಿ ನನ್ನ ಮೇಲೆ ಯಾವ ಭಾವನೆ ಮೂಡುತ್ತದೊ ಎಂಬ ಭಯದಲಿ ಹಿಂದೆ ಸರಿಯುತಿರುವೆ!


ಕೊಡಲೆಂದೇ ಬರೆದ ಪತ್ರ,
ಕೊಡಲಾಗುತಿಲ್ಲ.
ಪ್ರೀತಿಯ ಬಯಸಿ ಪ್ರೀತಿಸಿದ ಮನ
ಇಂದು ಅದ ತೋರುವಂತಾಗುತಿಲ್ಲ.
ಒಲವ ಅಭಿಷೇಕಗೈಯುವಂತೆ ಬಯಸಿದ ನಾನು,
ಇಂದು ಪ್ರೀತಿಯನೇ ಕೊಲ್ಲುತಿರುವೆನಲ್ಲ!

ಎಷ್ಟೇ ಹೆಳಿದರು, ಎಷ್ಟೇ ಕೇಳಿದರು, ಏಷ್ಟೇ ಚರ್ಚಿಸಿದರು, ಎಷ್ಟೇ ಯೊಚಿಸಿದರೂ, ಇದೇ ಉತ್ತರವು ನ(ನಿ)ನ್ನೊಲವಿಗೆ!(?) ಹಸಿಯಾದ ಕಾಗದ; ಒಲವ ಶೋಕ ಪತ್ರ! ಹ್ಮ್ಮ್ಮ್..ಚಿಂತಿಸದಿರು ಇದ ನಾ ನೀಡುವುದಿಲ್ಲ ನಿನಗೆ! ನಿಟ್ಟುಸಿರು ಬಿಟ್ಟು ಮನದಲಿ ಉರಿಯುತಿರುವ ಚಿತೆಗೆ ಹಸಿ ಹಾರಲೆಂದು(?) ಎಸೆಯುವೆನು!
ಕ್ಷಮಿಸುವುದಾದರೆ ಕ್ಷಮಿಸಿಬಿಡು!

Saturday, May 21, 2011

ಹೀಗೊಂದು ದಿನ. . .


ಹುಸಿ ಕೋಪದ ನಡುವೆ ತುಸು
ಪ್ರೀತಿಯ ಹೊನಲು
ನಡುವೆಯೆ ಚಂದ್ರಮನ ಬೆಳಕು.
ಕೈ ಬೆರಳುಗಳ ಮಿಲನದೊಂದಿಗೆ
ಸಾಗಿದೆ ಕಾಲ್ಗಳು ಬಲು ದೂರ.
ಅರ್ಧಾಕಾರದ ಚಂದ್ರಮನ ಸನಿಹದಿ
ಒಂದು ದೃಷ್ಟಿಬಟ್ಟಿನಂತಹ ಚುಕ್ಕಿ
ಹಾರಿದೆ ಮನಸ್ಸು ಪಕ್ಷಿಯಂತೆ ಅದನು ನೋಡಿ.
ಕಾರ್ಮೋಡದ ನದುವೆ ಶುದ್ಧ ಬಿಳಿಯ ಶಶಿ
ಇನಿಯನ ಕಣ್ಣಲ್ಲಿ ಪ್ರತಿಬಿಂಬಿಸಿದ ದೃಶ್ಯ ಬಲು ಸಿಹಿ.



Thursday, May 12, 2011

ತುಂಬಿಕೊಂಡಿರುವೆನು ನಿನ್ನನೆ ಪ್ರತಿ ಕಣದಲು.


ಮಾಮರದಲಿ ಕೋಗಿಲೆ ಇಲ್ಲ
ಹೂದೋಟದಲಿ ಹೂಗಳರಳಿಲ್ಲ
ಬಾನಲ್ಲಿ ಹುಣ್ಣಿಮೆಯ ಚಂದಿರನಿಲ್ಲ
ಸನಿಹದಲಿ ತಿಳಿ ತಂಗಾಳಿಯ ಸುಳಿವಿಲ್ಲ.

ಚೈತ್ರ ಮಾಸ ಮುಗಿಯಿತು ನನ್ನ ಲೋಕದಲಿ
ನೀ ನನ್ನ ಅಗಲಿದಾಗಿನಿಂದ
ಬರಿಯ ಶೋಕವೆ, ಬರಿಯ ಕಹಿ ನೆನಪುಗಳೆ ನನ್ನ ಪಾಲಿಗಿಲ್ಲಿ
ನೀ ನನ್ನ ಅಗಲಿದಾಗಿನಿಂದ.

ಎಂದು ಬಯಸದ ವರ
ಎಂದೂ ಕಾಣದ ಕನಸು
ನಿನ್ನ ಈ ಅಗಲಿಕೆಯು
ಮನವು ರೋಧಿಸುತಿದೆ ಪ್ರತಿ ಕ್ಷಣವು
ತುಂಬಿಕೊಂಡಿರುವೆನು ನಿನ್ನನೆ ಪ್ರತಿ ಕಣದಲು.

ಸಾಕು ಈ ನರಕ ಯಾತನೆ ನನಗೆ
ದಿನವು ಸಾಯುತಿರುವೆನು ಈ ಮೌನಕ್ಕೆ
ಕೇಳಿಕೊಳ್ಳುವೆನು ಕಾಲೂರಿ ನಿನಗೆ
ಮತ್ತೆ ಬಂದು ನಾಂದಿ ಹಾಡು ಪ್ರೀತಿಗೆ.



Wednesday, May 4, 2011

ಸ್ನೇಹ. . .???ಪ್ರೀತಿ. . .???. . .ಸ್ನೇಹ. . . :)

ಸ್ನೇಹಿತನಾಗಿರುವ ಅವನ ಮೇಲೆ
ಹೇಗೆ? ಏಕೆ? ಹುಟ್ಟಿತೋ ಈ ಪ್ರೀತಿ ನಾ ಕಾಣೆನು.
ಅವನೊಂದಿಗೆ ಸಲುಗೆ ಹೆಚ್ಚಿತೆ?
ಇಲ್ಲ ಸ್ನೇಹ ಹೆಚ್ಚಾಯಿತೆ?
ಪ್ರತಿದಿನದ ಹರಟೆ
ಪ್ರತಿ ದಿನದ ಹುಸಿ ಮುನಿಸು
ಇದೆ ಪ್ರೇರೇಪಿಸಿತೆ ಪ್ರೀತಿಸಲು?
ಎಂತಹ ಹುಚ್ಚು ಮನಸ್ಸು ನನ್ನದು?
ಅವನ ಅಮೃತ ಸ್ನೇಹವ
ಪ್ರೀತಿ ಎಂದು ಭಾವಿಸುತಿರುವೆನಲ್ಲ!
ಛೆ!! ಮರೆತು ಬಿಡು ಆ ಮಾತನ್ನು ಮನವೆ, ಅದು ತರವಲ್ಲ.
ಪ್ರೀತಿಯ ಹೆಸರಲಿ ಸ್ನೆಹ ಅಂತ್ಯಗೊಳ್ಳುವುದು ಬೇಡ.
ಪ್ರೀತಿಯ, ನಲುವಿನ ವಾತ್ಸಲ್ಯದ,
ಎಲ್ಲಾ ಭಾವನೆಗಳ ತುಂಬಿರುವ ಪರಿಶುದ್ಧ ಸ್ನೇಹಕ್ಕೆ
ಅಂತ್ಯವಾಡುವುದು ಬೇಡ.
ಸ್ನೇಹದ ಛಾಯೆ ಹೀಗೆ ಕಲ್ಮಶವಿಲ್ಲದೆ
ಕಾಂತಿಯ ಬೀರುತ ಚಿರವಾಗಿರಲಿ....