Monday, May 23, 2011

ಹಸಿಯಾದ ಕಾಗದ; ಒಲವ ಶೋಕ ಪತ್ರ

ನಿನ್ನ ಪ್ರೀತಿಗೆ ನನ್ನಲಿ ಬೆಲೆ ಇಲ್ಲದಂತಾಯಿತು
ನಿನ್ನೊಲವಿಗೆ ನಾ ತಣ್ಣೀರೆರೆಚಿದಾಯಿತು
ಏಕೆ ಇಷ್ಟಾದರು ಪ್ರೀತಿಸುತಿವೆ ನನ್ನನು?
ನನ್ನಲಿ ಅಂತಹದು ಇರುವುದಾದರು ಏನು?
ಪ್ರೀತಿಗೆ ಹೃದಯದಲಿ ಗುಡಿ ಇಲ್ಲ
ಬರಿಯ ಸ್ಮಶಾಣವೆ ಎಲ್ಲ!
ನಿನ್ನೊಲವ ಪಡೆವ ಅದೃಷ್ಟವ ಪಡೆದಿಲ್ಲ ನಾ
ಮರೆತುಬಿಡು, ಸಾಧ್ಯವಾದರೆ ಕ್ಷಮಿಸಿಬಿಡು

ಗೆಳೆಯ-ಗೆಳತಿಯರಿಬ್ಬರು, ಹೆಚ್ಚು ಪ್ರೀತಿ, ವಾತ್ಸಲ್ಯ, ಮಮತೆ ತೋರಿದರೆ ಅದೋ ಪ್ರೀತಿಯ ಮೊಳಕೆ ಚಿಗುರೊಡೆಯುವುದು! ಕೊಂಚ ಕೋಪ, ಕೊಂಚ ನಗು, ಸ್ವಲ್ಪ ತಲಹರಟೆ. ನಡುವೆಯೆ ನುಸುಳಿ ನುಸುಳಿ ಹೋಗುವ ಹುಸಿ ಮುನಿಸು. ಇದೆ ನೋಡು ಮಾರ್ಪಟ್ಟಿದೆ ಸ್ನೇಹ ಪ್ರೀತಿಗೆ!


ಆದರೆ ನನ್ನಲಿ ನಿನ್ನ ಒಲವ ಬಯಸುವ ಯಾವ ಅರ್ಹತೆಯೂ ಇಲ್ಲ. ಏಕೆಂದರೆ ನನ್ನಲಿ ಪ್ರೀತಿಗೆ ಯಾವ ಜಾಗವೂ ಇಲ್ಲ! ಇಷ್ಟಾದರೂ ಪ್ರೀತಿಸುತಿರುವೆನೆಂಬ ನಂಬಿಕೆ! ಆದರೆ ಒಪ್ಪಲಾಗದ ಕಹಿ ಸತ್ಯವದು.!ಏಕೆ? ಅದೋ ಮರೀಚಿಕೆ! ನಿನ್ನ ಪ್ರತಿ ಮಾತು, ನಿನ್ನ ನಗು, ಆ ನಿನ್ನ ತುಂಟತನ ಎಲ್ಲವೂ ಅತಿ ಮಧುರ. ಆದರೆ ಅದು ಕೇವಲ ನೆನಪಿನಲ್ಲಿ ಅಮರ! ಒಂದೆಡೆ ಪ್ರೀತಿ, ಒಂದೆಡೆ ಕುಟುಂಬ! ಒಪ್ಪದಿದ್ದರೆ ಈ ಪ್ರೀತಿಯ, ಮೇಲೇರುವುದು "ಎರಡರಲ್ಲಿ ಯಾವುದು ಅತಿ ಮುಖ್ಯ?" ಎಂಬ ಯಕ್ಷ ಪ್ರಶ್ನೆ! ಎನೆಂದು ಉತ್ತರಿಸಲಿ ಅಂದು? ನೀನೋ? ಅವರೋ?
ಇದೇ ಕಾರಣಕ್ಕೆ ಇಂದು ಮನ ರೋಧಿಸುತಿದೆ. ಮುಂದೆ ಆಗುವ ಈ ಕಾರ್ಯಕ್ಕೆ ಅಂತ್ಯವಾಡಬೇಕಿದೆ ಇಂದೆ! ಸಾವರಿಸಿಕೊಂಡು ಹೇಳುತಿರುವೆನು ನಿನ್ನ ಪ್ರೀತಿ ನನಗೆ ಬೇಡವೆಂಬ ಸುಳ್ಳನ್ನು! ಎನ್ನ ಸಂತೋಷಕ್ಕೆ ಇತರರ ನೋಯಿಸೆನು. ಅದಕ್ಕೆ ನನಗೆ ನಾನೇ ಮೋಸ ಮಾಡಿಕೊಳ್ಳುತಿರುವೆನು!


ಮನ ಬಿಕ್ಕಳಿಸಿ ಬಿಕ್ಕಳಿಸಿ ಅಳುತಿದೆ ಕಣೋ. ಕಣ್ಣೀರಲ್ಲಿ ಮಿಂದಿರುವ ಕಣ್ಣಿಗೆ ಎಲ್ಲವೂ ಮಂಜು ಮಂಜು! ಎಡಗೈಯಲಿ ರಕ್ತದ ಕಲೆ, ಬಲಗೈಯಲಿ ಕಣ್ಣೀರಿನ ಹನಿ, ಮನದಲಿ ಉರಿದುರಿದು ಸುಡುತಿರುವ ಚಿತೆ! ಎನೆಂದರೂ ತಡೆಯಲಾಗುತಿಲ್ಲ ಆ ಭಾಷ್ಪಾಂಜಲಿಯ! ಕಣ್ಣೀರಿನ ಈ ಮಳೆಗೆ ಕಾಗದವೂ ಹಸಿಹಸಿಯಾಗುತಿದೆ. ಶಾಯಿಯ ಅಕ್ಷರಗಳೆಲ್ಲವು ಹರಡುತಿವೆ.ಹಾಳೆಯು ಹರೆದು ಹೋಗುವ ಸ್ಥಿತಿಯ ತಲುಪಿದೆ. ಗಟ್ಟಿ ಮನಸ್ಸೇ ಇಂದು ಈ ಕಂಬನಿಯಲಿ ನೆನೆದು ಸೊರಗುತಿದೆ ಇನ್ನು ಈ ತಿಳಿ ಹಾಳೆಯ ತಪ್ಪೇನು!?


ನನ್ನ ಮನಸ್ಸಿನಲ್ಲಿರುವುದ, ನಿನ್ನ ಪ್ರೀತಿಗೆ ನನ್ನ ಇಚ್ಛೆ ಕೊಡಲಾಗದಿರುವುದ, ನಿನಗೆ ನೇರವಾಗಿ ಹೇಳಲಾಗದೆ ಈ ಪತ್ರದ ಮೂಲಕೆ ಹೇಳುವ ಬಯಕೆಯಾಯಿತು. ಆದರೆ, ಬಳಿಕ ನಿನ್ನಲಿ ನನ್ನ ಮೇಲೆ ಯಾವ ಭಾವನೆ ಮೂಡುತ್ತದೊ ಎಂಬ ಭಯದಲಿ ಹಿಂದೆ ಸರಿಯುತಿರುವೆ!


ಕೊಡಲೆಂದೇ ಬರೆದ ಪತ್ರ,
ಕೊಡಲಾಗುತಿಲ್ಲ.
ಪ್ರೀತಿಯ ಬಯಸಿ ಪ್ರೀತಿಸಿದ ಮನ
ಇಂದು ಅದ ತೋರುವಂತಾಗುತಿಲ್ಲ.
ಒಲವ ಅಭಿಷೇಕಗೈಯುವಂತೆ ಬಯಸಿದ ನಾನು,
ಇಂದು ಪ್ರೀತಿಯನೇ ಕೊಲ್ಲುತಿರುವೆನಲ್ಲ!

ಎಷ್ಟೇ ಹೆಳಿದರು, ಎಷ್ಟೇ ಕೇಳಿದರು, ಏಷ್ಟೇ ಚರ್ಚಿಸಿದರು, ಎಷ್ಟೇ ಯೊಚಿಸಿದರೂ, ಇದೇ ಉತ್ತರವು ನ(ನಿ)ನ್ನೊಲವಿಗೆ!(?) ಹಸಿಯಾದ ಕಾಗದ; ಒಲವ ಶೋಕ ಪತ್ರ! ಹ್ಮ್ಮ್ಮ್..ಚಿಂತಿಸದಿರು ಇದ ನಾ ನೀಡುವುದಿಲ್ಲ ನಿನಗೆ! ನಿಟ್ಟುಸಿರು ಬಿಟ್ಟು ಮನದಲಿ ಉರಿಯುತಿರುವ ಚಿತೆಗೆ ಹಸಿ ಹಾರಲೆಂದು(?) ಎಸೆಯುವೆನು!
ಕ್ಷಮಿಸುವುದಾದರೆ ಕ್ಷಮಿಸಿಬಿಡು!

3 comments:

  1. ಪ್ರೀತಿ ಮಾಡ ಬಾರದು.... ಮಾಡಿದರೆ ಜಗಕೆ ಹೆದರಬಾರದು ...
    ಪತ್ರ ಚೆನ್ನಾಗಿದೆ, ಪಾಪ ಬಡಪಾಯಿ ಏನ್ ಅನಾಹುತ ಮದ್ಕೊತನೋ

    ReplyDelete
  2. This comment has been removed by the author.

    ReplyDelete
  3. @vasant,
    thank u:)welcome to my blog:))

    @sandeep,
    ;)

    ReplyDelete