Sunday, July 1, 2012

ನಾನಿನ್ನು ವಿಧವೆ!


ಅಮ್ಮನ ಒಡಲಲ್ಲಿ
ನನಗಿಂದು ಸಂತಸ.
ಕಾಣಲೊರಟಿರುವೆ
ಬಾಹ್ಯ ಲೋಕವ!

ನಾನೊಂದು ಹೆಣ್ಣು!
ಅಯ್ಯನ ಕಂಗಳಲ್ಲಿ ತೃಪ್ತಿಯಿಲ್ಲ,
ಅಜ್ಜ-ಅಜ್ಜಿಯ ಹಿಡಿ ಶಾಪವೇ
ಅವ್ವನಿಗೆಲ್ಲ.
ಕಣ್ಣಲ್ಲೇನೋ ಕಂಡರು ಕೊಂಚ ಪ್ರೀತಿ,
ತುಂಬಿದೆ ಅಸಹಾಯಕತೆ ಸ್ಥಿತಿ.

ಐದು ತುಂಬುವಷ್ಟರಲ್ಲಿ
ಮನೆಯ ಕೆಲಸ ಸಿದ್ಧಿ
ನೆಂಟರಿಷ್ಟರು 'ಅಯ್ಯೋ'ಎನ್ನುವರು
ಅವ್ವನ ನೋಡಿ;
'ಛೇ! ಗಂಡಾಗಲಿಲ್ಲವಲ್ಲಾ!' ಎಂದು.

ಒಂಬತ್ತಕ್ಕೆ, ಕೊರಳಲ್ಲಿ
ಹಳದಿ ದಾರಜಾತ್ರೆಗೆ ಹೋದರೂ
ಬಣ್ಣದ ಟೇಪು ಖರೀದಿಸುವ ತವಕ.
ಬಳೆಗಾರ ಬಂದರೆ ಕೈಯ
ತುಂಬೆಲ್ಲ ಬಣದ ಚಿತ್ತಾರ!

ಹದಿಮೂರಕ್ಕೆ ಬಂತು
ರಂಗು ರಂಗಿನ ಆಸೆಗಳು
ನನ್ನ ಓರಗೆಯವರ ಜೊತೆ
ಆಡಿ ನಲಿಯಬೇಕೆಂದು.
ತಿಂಗಳುಗಳು ತುಂಬುವಷ್ಟರಲ್ಲಿ,
ಮಡಿಲು ತುಂಬಿಹೋಯಿತು!

ಹೆಣ್ಣು ಮಗು!
ಏಕೆ ಎಂದು ತಿಳಿಯದಿದ್ದರೂ
ಕಣ್ಣೇಕೋ ಹನಿಯುತಿತ್ತು.
ಅತ್ತೆ-ಮಾವ-ವಾರಗಿತ್ತಿಯರ
ಹೀಯಾಳಿಕೆಯಲ್ಲೇ ಬೆಳೆಯುತಿದೆ
ಮಗು ತೆವಳುತಿದೆ.

ಹುಟ್ಟಿ ವರುಷ ತುಂಬಿಹುದು
ಹಾಲು ಬಿಡಿಸಿಲ್ಲ
ಹುಟ್ಟು ದಿನಕ್ಕೆ ಸಡಗರವಿಲ್ಲ
ಸಿಹಿಯಿಲ್ಲ.
ಹೊಲಗೇರಿಯ ಶ್ವಾನದಂತೆ
ಹಳಸೇ ನನಗೆ; ಮಗುವಿಗೆ!

ಹಾಂ! ಚೀರಿದ ಗಂಡನೆಂಬುವವ,
ಉಸಿರಿಡಿದ; ಒಮ್ಮೆಲೇ ಬಿಟ್ಟೇಬಿಟ್ಟ!
ಮನೆಯೆಂಬುದು ನರಕವಾಗಿ ಹೋಯಿತು
ಆಡುವವರ ಬಾಯಿಗೊಂದು ಸುದ್ಧಿ ಸಿಕ್ಕಿತು
ಮೌನದ ನಿಟ್ಟುಸಿರು ತಿಳಿಯಲಿಲ್ಲ ಯಾರಿಗೂ!

ಸಿಂಗರಿಸಿದರು ವಧುವಂತೆ;
ಮುಡಿಯ ತುಂಬೆಲ್ಲ ಮಲ್ಲೆ, ಕನಕ
ಕೈಯ ತುಂಬೆಲ್ಲ ಹಸಿರು ಕೆಂಪು ಬಳೆ
ಹಣೆಯಲ್ಲಿ ರಾರಜಿಸುವ ಸಿಂಧೂರ
ಕೆನ್ನೆಗೆ ಲಕ್ಶ್ಮೀ ದೇವಿಯ ಅರಿಶಿನ
ಕಿವಿಗೆ ಜುಮಕಿ, ಕಾಲಿಗೆ ಸುತ್ತು ಗೆಜ್ಜೆ!

ಹೊಯ್ದರು ಸ್ಮಶಾನಕ್ಕೆ.
ಕಿತ್ತೆಸೆದರೇಕೆ ಮಲ್ಲಿಗೆ?
ಒಡೆದ ಬಳೆಯ ಸದ್ದಲಿದೆ
ನನ್ನ ಶೋಕ ಗೀತೆ.
ಸಿಂಧೂರವಿಲ್ಲದ ಖಾಲಿ ಹಣೆ
ಸಾರುವುದು ಮುಂದಿನ ಕಥೆ!
ನಾನಿನ್ನು ವಿಧವೆ!