ಮನದ ಕೋರಿಕೆಯು ಕೇಳಿಸದೇನೋ ಇನಿಯ?
ಬಂದೇಕೆ ಒಪ್ಪಲಾಗದು ನನ್ನ ಬಯಕೆಯ?
ನೀ ಹೇಳಿದಂತೆ ಇರುವುದು ದೀಪಾವಳಿಗೆ ಅಗಾಧ ಅರ್ಥ
ಪ್ರಣತಿಯಾಗಿ ಬರಲಿಚ್ಛಿಸುವೆ ನೀ ಅದ ತಿಳಿಯಲಾರೆಯ?
ಕರಾಳ ರಾತ್ರಿಯಲಿ ಬೆಚ್ಚುವೆ ನಾ ಒಬ್ಬಳೆ,
ನೀ ಬರಲೆಂದು, ಬೆಳಕ ತರಲೆಂದು ಬೇಡುವೆ
ಸಂಜೆಯ ತಂಪೊತ್ತಿನಲ್ಲಿ ಒಂಟಿಯಾಗಿ ಸಾಗುವ ವೇಳೆಗೆ,
ನೆನೆಯುವೆ, ತಡವರಿಸುವೆ ನಿನ್ನ ಒಲವಿನ ಕೂಗಿಗೆ
ಅಸ್ತು ಎಂದು ಹೇಳೋ ಹೃದಯೇಶ್ವರ,
ಓಡೋಡಿ ಬರುವೆ, ಬಂದೊಮ್ಮೆ ಅಪ್ಪುವೆ.
ಆನಂದದ ಭಾಷ್ಪದಲಿ ಹೃದಯವ ಮೀಯಿಸುವೆ,
ಮತ್ತೆಂದು ನಿನ್ನ ಬಿಡೆನು, ನಾ ಭಾಷೆ ಕೊಡುವೆ. . .