Wednesday, October 5, 2011

ಹೀಗೆ ಕೆಲವೊಮ್ಮೆ. . .

    ಒಂಟಿ ರಸ್ತೆಯಲಿ, ತಲೆ ತಗ್ಗಿಸಿ ಏಕಾಂತವಾಗಿ ನಡೆಯುತ್ತಿದ್ದಳು "ಅವಳು". ಮನಕ್ಕಾದ ನೋವು ಉತ್ತುಂಗಕ್ಕೇರಿತ್ತು. ಅರಿವಿಲ್ಲದೆಯೋ, ಮನಸ್ಸ ಇಚ್ಛೆ ಕೇಳಿಯೋ ಏನೋ ಹೊರಕ್ಕೆ ಜಿಗಿಯಿತು ಒಂದು ಹನಿ ಕಣ್ಣಿನಿಂದ. ಪ್ರೀತಿಯು ಬರುಡಾಗಿದೆ, ಕಣ್ಣೀರಿನ ಕೋಡಿ ಹರಿಸಿಯಾದರೂ ಜೀವ ತುಂಬುವ ಆಸೆಯೋ ಏನೊ ಒಂದೊಂದೆ ಹನಿಯನೂ ಹೊರ ದಬ್ಬಲು ಆರಂಭಿಸಿದಳು. ನಡುವೆ ಎಲ್ಲಿಂದಲೊ ಕೇಳಿಸಿದ ಯಾರದೋ ಧನಿಯಿಂದ ಎಚ್ಚರಗೊಂಡು, ನಾನು ಜನರ ನಡುವೆ ಇದ್ದೇನೆ, ಇದು ನನ್ನ ಕತ್ತಲೆಯ ಕೋಣೆಯಲ್ಲ ಎಂದುಕೊಂಡು ಕಣ್ಣೀರು ಕಣ್ಣಿನಿಂದ ಹೊರಬರದಂತೆ ನೋಡಿಕೊಂಡಳು. ಆದರೆ ಮನಸ್ಸು ಬಿಕ್ಕಿ ಬಿಕ್ಕಿ ಅಳುತಿತ್ತು. ಯಾರನ್ನೋ ನೆನೆಯುತ್ತಿತ್ತು, ಯಾರಿಗೋ ಕಾಯುತಿತ್ತು, ಯಾರೊಂದಿಗೋ ಸಂಭಾಷಿಸುತಿತ್ತು. ಮತ್ಯಾರಿಗೋ ಶಪಿಸುತಿತ್ತು. ಹೀಗೆ ತಲುಪಿದಳು ತನ್ನ ಸೂರಿಗೆ. ಮನ ಅವಳ ಕೋಣೆಯ ಒಂದು ಮೂಲೆಯನು ಬಯಸುತಿತ್ತು. ಧಾವಿಸಿದಳು ತನ್ನ ಕೋಣೆಗೆ, ಬಾಗಿಲನು ಬಿಗಿಯಾಗಿ ಹಾಕಿ ಅಲ್ಲೇ ಕುಸಿದಳು. ಕಣ್ಣನ್ನು ಕೈಯಲ್ಲಿ ಮುಚ್ಚಿ ಬಿಕ್ಕಿ ಬಿಕ್ಕಿ ಅಳತೊಡಗಿದಳು! ಏನೋ ಹೇಳಬೇಕು, ಯಾರೊಂದಿಗಾದರು ತನ್ನ ದುಃಖವ ಹಂಚಿಕೊಳ್ಳಬೇಕು ಎಂದು ಮನಸ್ಸು ಆಶಿಸುತಿತ್ತು. ಆದರೆ ಅವಳಿಗೆ ಇದ್ದವರಾದರು ಯಾರು? ಒಂಟಿ ಹುಡುಗಿ.., ಮನಸ್ಸೇ ಅವಳಿಗೆ ಎಲ್ಲಾ. ಯಾರ ಜೊತೆ ಮಾತನಾಡಬೇಕು ಎಂದನಿಸಿದರೆ ಹಾಗೇ ಮಾತಾಡುವಳು, ನೋವ ಹೊರಹಾಕುವಳು ಕಣ್ಣೀರಿಡುತ್ತ. ಎಲ್ಲ ಕೇಳಿಸಿಕೊಳ್ಳುತಿದ್ದ ಆ ಗಾಳಿಯು ಅವಳ ಮೊಗವ ಒಮ್ಮೆ ಸವರಿ, ಕಣ್ಣೀರಾರಿಸಿ ಹೋಗುತಿದ್ದವು. ಅವುಗಳಿಂದಲೇ ಅವಳಿಗೆ ಸಮಾಧಾನ! ದಿನವೂ ನಾಲ್ಕು ಮೂಲೆಯ ಆ ಕತ್ತಲೆ ಕೋಣೆ, ಸಂಜೆಯ ಆ ಆಗಸ ಹಾಗೂ ತಂಗಾಳಿ, ನೆಚ್ಚಿನ ಭಾವಗೀತೆ, ನೊಂದ ಮನಸ್ಸೇ ಅವಳಿಗೆ ಜಂಟಿಯಾಗಿ ಬರುತಿದ್ದರು. ಹೀಗೆ ಅವಳು ತನ್ನ ತಪ್ಪೆ, ತನ್ನ ನಲ್ಲನ ತಪ್ಪೆ, ಅಥವಾ ಮನಸ್ಸಿನದೊ ಇಲ್ಲ ವಯಸ್ಸಿನದೋ ಎಂದು ಉತ್ತರವೇ ಇಲ್ಲದ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಕೂರುತಿದ್ದಳು.


    ಅಗಾಧವಾಗಿ ಅವನನ್ನು ಹಚ್ಚಿಕೊಂಡಿದ್ದವಳು, ಇಂದು ಅವನು ಬೇಡವೆಂಬ ನಿರ್ಧಾರಕ್ಕೆ ಬಂದಿದ್ದಾಳೆ. ಕಾರಣ ಅವನು ತನ್ನ ಜೊತೆಗೆ ಹೆಚ್ಚಿನ ಸಮಯ ಇರುವುದಿಲ್ಲ ಎಂಬುದು..! ಹಾಗೂ ಆ ಯೋಚನೆಗೆ ಈಗ ಅವನು ಮೊದಲಿನಂತೆ ಇಲ್ಲವೆಂದೂ, ಮೊದಲಿನಂತೆ ಪ್ರೀತಿ ತೋರುತಿಲ್ಲವೆಂದು ಹಾಗೂ ಅವಳನ್ನು ನಿರ್ಲಕ್ಷಿಸುತಿರುವನು ಎಂದೂ ಹೇಳಲು ಶುರು ಮಾಡಿದೆ ಮನವು.!


    ಹುಡುಗೀರ ಮನಸ್ಸೇ ಹೀಗೆ! ತಾವು ಅಚ್ಚಿಕೊಂಡವರು, ಆಪ್ತರಾದವರು ಯಾವಾಗಲೂ ತಮ್ಮೊಟ್ಟಿಗೆಯೇ ಇರಬೇಕೆಂಬ ಬಯಕೆ. ಮನಸ್ಸಲ್ಲಿ ಯಾರದರು ಒಂದು ಸ್ಥಾನ ಗಿಟ್ಟಿಸಿಕೊಂಡಿದ್ದರೆ, ಆ ಸ್ಥಾನದಲ್ಲಿ ಕೇವಲ ಅವರಿಗೆ ಮಾತ್ರ ಜಾಗ. ಅವರು ಎದ್ದು ಹೋದರೂ ಅವರದೇ ಚಿಂತೆ. ಅವರೇ ಆ ಜಾಗ ತುಂಬ ಬೇಕೆಂಬ ಬಯಕೆ. ತಮ್ಮ ಸುಖ ದುಃಖಗಳಿಗೆ ಕಿವಿಯಾಗುತಿದ್ದವರು, ಸಂತೋಷ-ಉತ್ಸಾಹ ನೀಡುತಿದ್ದವರು ದೂರವಾದರೆ, ಜೊತೆಗೆ ಯಾರೂ ಇಲ್ಲವಾಗಿ ಒಂಟಿಯಾದರೆ ಹೆಣ್ಣು ಮಕ್ಕಳ ಸುತ್ತ ಸುತ್ತುವರೆದು ನಿಲ್ಲುವುದು ಕೇವಲ ನೆನಪು! ಆ ನೆನಪುಗಳ ನೆನೆದು ಅವನೆಲ್ಲ ಮತ್ತೊಬ್ಬರ ಜೊತೆಗೆ ಅಂಚಿಕೊಳ್ಳಬೇಕೆಂಬ ಬಯಕೆ ಉಂಟಾದಾಗ ಜೊತೆಯಾಗುವುದು ಆ ಕೆಂಪೇರಿದ ಮೋಡ, ಇಲ್ಲವೆ ಕೆಂಪು ಸೂರ್ಯನನ್ನು ತೆರೆಯ ಹಿಂದೆ ಸರಿಸಿ, ಕಾರ್ಮೋಡದ ನಡುವೆ ಬಂದ ತಿಂಗಳು, ಅದರ ಸುತ್ತ ಮುತ್ತ ಪಳ ಪಳನೆ ಹೊಳೆಯುವ ನಕ್ಷತ್ರಗಳು, ತಂಪಾಗಿ ಎಲ್ಲಿಂದಲೋ ಬೀಸಿ ಬರುವ ತಂಗಾಳಿ, ಇಲ್ಲದಿದ್ದರೆ ತನ್ನ ಕೋಣೆಯು, ಅದರೊಳಗೆ ಇನ್ನೂ ಅವಳ ನಿಟ್ಟುಸಿರ ಬಿಸಿ ಆರದ ಕಾವು, ಇಲ್ಲವೆ
                                    "ಬಾನಿನಲ್ಲಿ ಒಂಟಿ ತಾರೆ, ಸೋನೆ ಸುರುವ ಇರುಳ ಮೋರೆ,
                                    ಕತ್ತಲಲ್ಲಿ ಕುಳಿತು ಒಳಗೆ ಬಿಕ್ಕುತಿಹಳು ಯಾರೊ ನೀರೆ"
ಎಂಬ ಮೆಚ್ಚಿನ ಭಾವಗೀತೆಯ ನೆಚ್ಚಿನ ಸಾಲುಗಳು ಜೊತೆಯಾಗಿ ಅವಳ ಜೊತೆ ದುಃಖಿಸುತವೆ!


    ಹಾಗೇ ಆಗಿದ್ದು "ಅವಳ"ಲ್ಲಿಯೂ. ಅಚ್ಚಿಕೊಂಡ ನಲ್ಲನನ್ನು ದೂರಮಾಡಿದ್ದಾಳೆ. ಅಚ್ಚಿಕೊಂಡ ತಪ್ಪಿಗೆ, ದೂರ ಮಾಡಿದ ತಪ್ಪಿಗೆ ಕೊರಗುತಿದ್ದಾಳೆ! ನರಳುತಿದ್ದಾಳೆ! ಬಿಕ್ಕುತಿದ್ದಾಳೆ!


    ಯಾರ ತಪ್ಪು ಇಲ್ಲಿ? ಅವನನ್ನು ಅಚ್ಚಿಕೊಂಡ ಇವಳ ತಪ್ಪೆ? ನೆಚ್ಚಿನ ನಲ್ಲ ಎಂದಿಗೂ ನನ್ನೊಂದಿಗೇ ಇರಬೇಕೆಂಬ ಹುಚ್ಚು ಮನಸ್ಸಿನ ತಪ್ಪೆ? ಅವಳ ಜೊತೆ ಇರಬೇಕು ಎಂದು ಬಯಸುತಿದ್ದರೂ, ಆ ರೀತಿ ಆಗುತಿಲ್ಲ ಎಂಬ ಅವನ ತಪ್ಪೆ? ಮೊದಮೊದಲು ಜೊತೆಗೇ ಇದ್ದ, ಹಲವು ಬಾರಿ ಪ್ರೀತಿ ಹೇಳುತಿದ್ದ, ನಲಿವಿನಲ್ಲೇ ಮುಳುಗೇಳಿಸುತಿದ್ದ ಅವನ ಮಾತಿನ ತಪ್ಪೆ? ಭವಿಷ್ಯ ಮುಖ್ಯ ಎನ್ನುವ ಅವನ ಪ್ರಭುದ್ದತೆಯ ತಪ್ಪೆ? ವರ್ತಮಾನದ ಸೊಬಗ ಬಯಸುವ ಅವಳ ತಪ್ಪೆ? ಇಲ್ಲವೆ ಅವಳ ಗುಣವು ಹೀಗಿದ್ದರೂ, ಅವನ ಗುಣ ಹಾಗಿದ್ದರೂ, ಇವರಿಬ್ಬರ ನಡುವೆ ಪ್ರೀತಿ ಎಂಬ ಬಲೆ ಬೀಸಿ ಮೇಲೆ ಇರುವ (!?) ಆ ದೇವರ ತಪ್ಪೆ?


                                    ಕಾಲವು ಅದೆಂತಹ ಕೀಚಕನು
                                    ಪ್ರೀಮಿಗಳ ದೂರ ಮಾಡಿಹನು
                                    ದೇವನಾಗಿರುವನು ಖಳನಾಯಕ
                                    ಪ್ರೀತಿ ಆಗುವುದೆ ನಿರರ್ಥಕ!?

5 comments:

  1. This comment has been removed by the author.

    ReplyDelete
  2. ನಿಮ್ಮ ಕಲ್ಪನೆ ಚೆನ್ನಾಗಿದೆ.
    ಇದು ಕಥೆ ಆಗಿದ್ದರೆ ಚೆನ್ನಾಗಿರುತ್ತೆ ವಾಸ್ತವದಲ್ಲಿ ಅಲ್ಲ..
    ನಮ್ಮ ಜೀವನದಲ್ಲಿ ಒಬ್ಬರಿಗೆ ಒಂದು ಸ್ಥಾನ ಕೊಟ್ಟಿರುತ್ತೀವಲ್ಲ ಅ ಜಾಗವನ್ನು ಸಾವಿರ ಜನರೂ ಬಂದರೂ ತುಂಬುವುದಕ್ಕೆ ಆಗುವುದಿಲ್ಲ ಆ ಜಾಗ ಯಾವತ್ತಿದ್ದರೂ ಖಾಲಿನೇ ಮತ್ತೆ ಅವರೆ ಆ ಸ್ಥಾನಕ್ಕೆ ಬಂದರೂ ಏನೋ ಶೂನ್ಯ ಭಾವ..
    ಕತ್ತಲೆಯಲ್ಲಿ ಕೂಡ ನೆರಳೂ ಕೂಡ ಹಿಂಬಾಲಿಸುವುದಿಲ್ಲ ಆದರೆ ನೆನಪುಗಳು ಹಿಂಬಾಲಿಸುತ್ತವೆ ಅದು ಕಹಿ ನೆನಪಾದರೂ ಆಗಬಹುದು ಅಥವಾ ಸಿಹಿ ನೆನೆಪಾದರೂ ಆಗಬಹುದು.
    ಹುಡುಗೀರ ಮನಸ್ಸು ಮಾತ್ರ ಹೀಗೆ ಇರುವುದಿಲ್ಲ ಒಳ್ಳೆ ಮನಸ್ಸು ಇರುವ ಪ್ರತಿಯೊಬ್ಬರಲ್ಲೂ ಕಳೆದುಕೂಂಡ ನೋವಿರುತ್ತದೆ..
    ತಪ್ಪಿದ್ದರೆ ಕ್ಷಮೆ ಇರಲಿ ವಿದ್ಯಾ.......:):):)

    ReplyDelete
  3. ಬರಹದ ನೌಕೆ ಬಹಳ ಚೆಂದದಿಂದ ಸಾಗುತ್ತಿದೆ..... ಓದುಗನ ಮನ ತಟ್ಟುತ್ತಿದೆ..... ಮುಂದುವರೆಸಿ....

    ReplyDelete
  4. @manju,
    tappEnu illa neev heliddu...thanks respond maadidakke....:)

    ReplyDelete