Wednesday, January 22, 2014

ಮುಖವಾಡದ ಲೋಕ

ಕನ್ನಡಿ ಹಿಂದೊಂದು 
ಲೋಕವಿದೆ,
ಮುಖವಾಡದ
ಹ್ಯಾಲೋವೀನ್ ಹಬ್ಬವಿದೆ.

ಕಂಡದೆಲ್ಲವೂ ಭ್ರಮೆಯೇ.
ಹೊರಗೊಂದು ಒಳಗೊಂದು.
ಬೀಭತ್ಸ ದಿನಗಳಲೊಂದು 
ತೋರಿಕೆಯ ಒಯ್ಯಾರ. 

ಗಂಟಲು ಒಣಗುವಷ್ಟು ಚೀರಿದರೂ,
ಆಂತರ್ಯದಲೆಲ್ಲೊ
ನೀರವದ ಹುಡುಕಾಟ! 
ಮುಕ್ತನಾಗುವ ಹಂಬಲ!

ಕಾಲಕ್ಕೆ ತಕ್ಕಂತೆ 
ಸಿಕ್ಕ ವೇಷ ಧರಿಸುವ
ರೂಪಧಾರಿಗಳು!
ಥೇಟ್ ಶೋರೂಂ ನ 
ಬೊಂಬೆಗಳಂತೆ! 

ಟಿಶ್ಯೂ ಪೇಪರ್ ಅಂತೆ 
ಬೆಸೆದುಕೊಂಡ ಸಂಬಂಧಗಳ
ಹರಾಜು ಹಾಕುವ 
ಸಿದ್ಧ ಮಾರುಕಟ್ಟೆ!
ಹಳಸಿದ ಭಾವನೆಗಳ 
ಉಣ್ಣ ಬಡಿಸೊ
ಭಟ್ಟರ ಪಾಕಶಾಲೆ. 

ಕನ್ನಡಿ ಹಿಂದೆ ಹೀಗೊಂದು 
ಲೋಕವಿದೆ 
ಮುಖವಾಡದ 
ಹ್ಯಾಲೋವೀನ್ ಹಬ್ಬವಿದೆ.

-ವಿದ್ಯಾ ರಮೇಶ್

Sunday, January 12, 2014

ಅನಂತವಾಗಿ

ಅಲ್ಲೆಲ್ಲೊ ಕಂಡೂ ಕಾಣದ ಗುರಿ. 
ನಡೆದೆ ನಡೆದೆ ನಡೆದೆ 
ಕಲ್ಲು ಮುಳ್ಳುಗಳ 
ಹಾದಿಯ ದಾಟಿ. 

ಒಂದೊಂದು ಗೆಲುವು, 
ಒಂದೊಂದು ಸೋಲು. 
ಸೋತರೂ, ಗೆದ್ದರೂ
ದಿಗಂತವ ಮುಟ್ಟಿಲ್ಲ. 
ಮತ್ತಷ್ಟು ನಡೆದೆ. 

ನಡೆದಷ್ಟು ಮುಗಿಯದ ಕೇರಿ. 
ನಿಲ್ಲಬೇಕೆಂಬ 
ಆಸೆ ಇಲ್ಲದ ನದಿಯಂತೆ ಓಡಿದೆ 
ಧಣಿವ ಜೊತೆಗೂ. 
ಥತ್! ಎಡವಿದೆ! 
ಏನಾಯಿತೆಂದು ಹಿಂದಿರುಗಿದರೆ, 
'ನಿಧಾನಿಸೆ ಹುಡುಗಿ'
ಎಂಬಂತೆ ಒಂದು ಕಲ್ಲು. 

ಕುಳಿತೆ
ಬಂದ ದಾರಿಯನ್ನೆ ದಿಟ್ಟಿಸುತ. 
ಸಾಗಿ ಬಂದಷ್ಟು ದೂರ 
ನೆನಪುಗಳ ಹೊತ್ತು ತಂದಿದ್ದೆ;
ನನ್ನ ಗೆಲುವು ಎಂಬಂತೆ, 
ಬಾಯರಿದ ಮನಕ್ಕೆ ಅಮೃತದಂತೆ! 

ನಡೆಯಲೆದ್ದು ನಿಂತೆ 
ಮತ್ತದೆ ಮುಗ್ಧ ಉತ್ಸಾಹದೊಂದಿಗೆ. 
ನಡೆದೆ, ನಡೆದೆ, ನಡೆದೆ.. 
ಸೋಲು ಗೆಲುವಿನ ಜೊತೆಗೆ 
ನಡೆಯುತಲೇ ಇರುವೆ 
ನಿಂತಲ್ಲಿ ನಿಲ್ಲದೆ
ಅನಂತವಾಗಿ.