ಜಲಿಯನ್ ವಾಲಾ ಬಾಗ್.....; ಹೆಸರು ಕೇಳುತಿದ್ದಂತೆ ಕಿವಿ ನೆಟ್ಟಗಾಗುತ್ತದೆ, ಕಣ್ಣು ತುಂಬುತ್ತದೆ, ಕೋಪ ನೆತ್ತಿಗೇರುತ್ತದೆ, ರೋಷ ಉಕ್ಕಿಬರುತ್ತದೆ. ಕಾರಣ ಅಂದು ಆ ಉದ್ಯಾನವನದಲಿ ನಡೆದ ಸಾವಿರಾರು ಜನರ ಮಾರಣಹೋಮ.
೧೩ ಏಪ್ರಿಲ್ ೧೯೧೯, ಪಂಜಾಬ್ ಪ್ರಾಂತ್ಯದ ಸಿಖ್ಖರ ಪವಿತ್ರ ಕ್ಷೇತ್ರವಾದ ಅಮೃತಸರದಲ್ಲಿರುವ ಚಿನ್ನದ ದೆವಸ್ಥಾನದ ಸಮೀಪದಲ್ಲಿರುವ ಜಲಿಯನ್ ವಾಲಾ ಬಾಗ್ ಉದ್ಯಾನ ವನದಲ್ಲಿ ಸಹಸ್ರಾರು ಮಂದಿ ಬೈಸಾಖಿ/ವೈಸಾಖಿ ಹಬ್ಬವನ್ನಾಚರಿಸಲು ನೆರೆದಿದ್ದರು. ಆದರೆ, ಅಮೃತಸರದಲ್ಲಿ ಮಾರ್ಷಲ್ ನಿಯಮದಂತೆ ನಾಲ್ಕಕಿಂತ ಹೆಚ್ಚಿನ ಜನ ಗುಂಪುಗೂಡುವಂತಿರಲಿಲ್ಲ. ಆದ್ದರಿಂದ ಅಂದು ನಡೆಯಲಾಗಿದ್ದ ಆ ಹಬ್ಬದ ಆಚರಣೆಯು ನಿಯಮದ ಉಲ್ಲಂಘನೆ ಎಂಬ ಕಾರಣದಿಂದ ಅಲ್ಲಿ ಸಾವಿರಾರು ಜನರ ಕಗ್ಗೊಲೆ ನಡೆಯಿತು.
ಬ್ರಿಗೇಡಿಯರ್ ಜನರಲ್ ರೆಗಿನಾಲ್ಡ್ ಡೈಯರ್ ಅವನಿಂದ ಈ ಕೃತ್ಯ ನಡೆಯಿತು. ಬಂದೂಕುಗಳಿಂದ ಸಜ್ಜಿತವಾದ ಐವತ್ತು ಸೈನಿಕರುಳ್ಳ ಒಂದು ಸೇನೆಯ ಗುಂಪು ಉದ್ಯಾನವನದೊಳಗೆ ಪ್ರವೆಶಿಸಿತು. ಬರುತಿದ್ದಂತೆಯೇ ಅಲ್ಲಿ ಹಬ್ಬವನ್ನಾಚರಿಸಲು ನೆರೆದಿದ್ದ ಜನರಿಗೆ ಯಾವುದೇ ರೀತಿಯಾದ ಆದೇಶವಾಗಲಿ, ಎಚ್ಚರಿಕೆಯಾಗಲಿ ಕೊಡದೆ, ಗುಂಡು ಹಾರಿಸುವಂತೆ ಸೈನಿಕರಿಗೆ ಆಜ್ಞೆ ಮಾಡಿದನು ಜನರಲ್ ಡೈಯರ್. ಸತತವಾಗಿ ೧೦ ರಿಂದ ೧೫ ನಿಮಿಷದವರೆಗೆ ಗುಂಡಿನ ಸುರಿಮಳೆಯಾಯಿತು. ಉದ್ಯಾನವನದ ಗೋಡೆಗಳು ಎತ್ತರವಾಗಿದ್ದರಿಂದ ಹಾಗೂ ಇತರೆ ಪ್ರವೇಶದ್ವಾರಗಳು ಶಾಶ್ವತವಾಗಿ ಮುಚ್ಚಲ್ಪಡಲಾಗಿದ್ದರಿಂದ ಬೀತಿಗೊಂಡ ಜನರು, ಗೋಡೆ ಹತ್ತಿಯಾದರು ಜೀವ ಉಳಿಸಿಕೊಳ್ಳಲು ಪ್ರಯತ್ನಿಸಿದರು. ಇನ್ನು ಕೆಲವರು ಉದ್ಯಾನವನದಲ್ಲಿದ್ದ ಬಾವಿಯೊಳಗೆ ಹಾರಿದರು. ಅಂಕಿಅಂಶದ ಪ್ರಕಾರ, ಬಾವಿಯೊಳಗಿಂದ ನೂರಕ್ಕೂ ಹೆಚ್ಚು ಶವಗಳನ್ನು ತೆಗೆಯಲಾಗಿತ್ತು. '೩೭೯' ಬ್ರಿಟಿಷ್ ಸರ್ಕಾರವು ನೀಡಿದ್ದ ಸಾವಿಗೀಡದವರ ಸಂಖ್ಯೆಯಾಗಿತ್ತು. ಆದರೆ ಇಂಡಿಯನ್ ನಾಶನಲ್ ಕಾಂಗ್ರೆಸ್ ಅವರ ಹೇಳಿಕೆಯ ಪ್ರಕಾರ ಸಾವಿರಕ್ಕೂ ಹೆಚ್ಚು ಜನ ಮೃತಪಟ್ಟಿದ್ದರು ಹಾಗೂ ಸಾವಿರದ ಐದುನೂರಕ್ಕು ಹೆಚ್ಚು ಜನ ಗಾಯಗೊಂಡಿದ್ದರು. ಕರ್ಫ್ಯು ಇದ್ದ ಕಾರಣ ಎಷ್ಟೋ ಗಾಯಗೊಂಡ ಜನರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಲಿಲ್ಲ.
ಘಟನೆಯ ನಂತರ ಡೈಯರನು ಮೇಲಧಿಕಾರಿಗಳಿಗೆ, ವಿದ್ರೋಹಿ ಸೈನ್ಯವು ಎದುರಾದುದರಿಂದ ಅವರಿಗೆ ಪಾಠ ಕಲಿಸುವುದಕ್ಕಾಗಿ ಈ ರೀತಿ ಮಾಡಿದೆನೆಂದು ಹೇಳಿದನು. ಪ್ರತಿಯಾಗಿ ಅಂದಿನ ಲೆಫ್ಟಿನೆಂಟ್ ಗವರ್ನರ್ ಆದ ಓ'ಡ್ವಯರ್, 'ಈ ಘಟನೆಯನ್ನು ನಾವು ಒಪ್ಪುತ್ತೆವೆ, ಸರಿಯಾಗಿ ಪಾಠ ಕಲಿಸಿದಿರಿ' ಎಂದು ಸಂದೇಶ ಕಳುಹಿಸಿದ.
ನಂತರದಲ್ಲಿ, ವಿಚಾರಣೆಗಾಗಿ ಡೈಯರ್ ನನ್ನು ಹಂಟರ್ ಆಯೋಗಕ್ಕೆ ಬರುವುದಾಗಿ ಆದೇಶ ಕಳುಹಿಸಲಾಗಿತ್ತು. ವಿಚಾರಣೆಯ ಸಂದರ್ಭದಲ್ಲಿ ಡೈಯರ್, ಜಲಿಯನ್ ವಾಲ ಬಾಗ್ನಲ್ಲಿ ನಡೆಸಲು ಉದ್ದೆಶಿಸಲಾಗಿದ್ದ ಕಾರ್ಯಕ್ರಮದ ಬಗೆಗೆ ನನಗೆ ಮಧ್ಯಾನವೇ ತಿಳಿದಿತ್ತಾದರೂ, ಅದ ತಡೆಯಲು ಯಾವುದೇ ಕ್ರಮ ಕೈಗೊಂಡಿರಲಿಲ್ಲ ಹಾಗು ತಾನು ಜಲಿಯನ್ ವಾಲಾ ಬಾಗ್ಗಿಗೆ ಗುಂಡು ಹಾರಿಸುವ ಉದ್ದೆಶದಿಂದಲೇ ತೆರಳಿದ್ದಾಗಿ ಹಾಗು ಗಾಯಗೊಂಡವರ ಆರೈಕೆ ಆಸ್ಪತ್ರೆಗಳ ಕರ್ತವ್ಯ ನನ್ನದಲ್ಲ ಎಂದು ರಾಜಾರೋಷವಾಗಿ ಹೇಳಿಕೊಂಡನು. ಇವನ ಈ ಅಮಾನುಷ ಕೃತ್ಯದಿಂದಾಗಿ ಇವನನು 'ಅಮೃತಸರದ ನಿರ್ದಯಿಪಶು' ಅಥವಾ 'The Butcher of Amritsar' ಎಂದು ಕರೆಯುತಿದ್ದರು.
ಈ ಹತ್ಯಾಕಾಂಡವು ಭಾರತದ ಸ್ವತಂತ್ರ್ಯ ಚಳುವಳಿಗೆ ವೇಗೊತ್ಕರ್ಷವಾಗಿ ಪರಿಣಮಿಸಿತು. ಈ ದುರಂತದಿಂದ ಬ್ರಿಟಿಷರು ಹಾಗೂ ಭಾರತೀಯರ ನಡುವೆ ದೊಡ್ಡ ಕಂದರ ನಿರ್ಮಾಣವಾಗಿ ವಿಶ್ವಾಸವಿಟ್ಟವರಲ್ಲೂ ಕೂಡ ನಂಬಿಕೆ ಸಡಿಲವಾಯಿತು. ಆಳುವವರ ಮತ್ತು ಪ್ರಜೆಗಳ ನಡುವೆ ವಿಶ್ವಾಸ-ಸಂಬಂಧ ಕುಸಿದು ಬಿದ್ದು ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಚಳುವಳಿಯ ರೂಪ ಬದಲಾಯಿತು. ಈ ಘಟನೆಯೇ ಕ್ರಾಂತಿಕಾರಿ 'ಶಹೀದ್ ಭಗತ್ ಸಿಂಗ್' ಅವರನು ಸ್ವತಂತ್ರ್ಯ ಹೋರಟದಲಿ ನಾನೂ ಭಾಗಿಯಾಗಬೇಕು, ಭಾರತಮಾತೆಯನು ಇಂತಹ ಪಶುಗಳಿಂದ ರಕ್ಷಿಸಬೇಕೆಂಬ ಸ್ಫೂರ್ತಿ ತಂದಿತು. ಈ ಕೃತ್ಯದಿಂದಾಗಿಯೆ ಗಾಂಧಿ ಬ್ರಿಟಿಷರ ವಿರುದ್ಧ ನಡೆಸಿದ 'ಅಸಹಕಾರ ಸತ್ಯಾಗ್ರಹ'ಕ್ಕೆ ಹೆಚ್ಚಿನ ಜನ ಪಾಲ್ಗೊಳ್ಳುವಂತೆ ಪ್ರೇರೇಪಿಸಿತು.
ರಾಷ್ರೀಯ ಚಳುವಳಿಯ ಕಾವನ್ನು ಆರಿಸಲು ಮಾಂಟೇಗೊಚೇಮ್ಸ್ ಫರ್ಡ್ ಸುಧಾರಣೆಗಳನ್ನು ಬ್ರಿಟಿಷ್ ಸರ್ಕಾರ ಪ್ರಕಟಿಸಿತು. ಆದರೆ ಕಾಂಗ್ರೆಸ್ ಅದನ್ನು ಒಪ್ಪಿಕೊಳ್ಳಲ್ಲಿ. ಸುಧಾರಣೆಗಳು ಭಾರತೀಯರಿಗೆ ಸಮಾಧಾನ ತರಲಿಲ್ಲ.
ನಂತರ ಮಾರ್ಚ್ ೧೩, ೧೯೪೦, ಉಧಾಮ್ ಸಿಂಗ್ (ಅವರು ಜಲಿಯನ್ ವಾಲಾ ಬಾಗ್ ಹತ್ಯಾಕಾಂಡದ ಪ್ರತ್ಯಕ್ಷದರ್ಶಿ ಹಾಗೂ ಅಲ್ಲಿ ನಡೆದ ಕೃತ್ಯದಿಂದ ನೋವನುಭವಿಸಿದವರು) ಎಂಬ ವ್ಯಕ್ತಿ ಓ'ಡ್ವಯಾರ್ ನನ್ನು ಲಂಡನ್ನಿನ ಕ್ಯಾಕಿಸ್ಟನ್ ಹಾಲ್ನಲ್ಲಿ ಹತ್ಯೆ ಮಾಡಿದರು. ಓ'ಡ್ವಯಾರ್, ಡೈಯರ್ ನ ಕೃತ್ಯವನ್ನು ಅನುಭೋದಿಸಿದಕ್ಕಾಗಿ ಹಾಗೂ ಸ್ವತಃ ಅವನೇ ಈ ಕೃತ್ಯದ ಯೋಜನೆಗಾರನಾಗಿದ್ದನೆಂಬ ಕಾರಣದಿಂದ ಅವನನ್ನು ಹತ್ಯೆ ಮಾಡಲಾಯಿತು.
ವಿಚಾರಣ ವೇಳೆ ನ್ಯಾಯಾಲಯದಲಿ ಉಧಾಮ್ ಸಿಂಗ್ ಅವರು, "ನಾನು ಹೀಗೆ ಮಾಡಲು ಅವನ ಮೇಲೆ ಇದ್ದ ಹಗೆಯೇ ಕಾರಣ. ಈ ಸೇಡು ತೀರಿಸಿಕೊಳ್ಳಲು ೨೧ ವರುಷಗಳಿಂದ ಕಾಯುತಿದ್ದೆ. ಕೊನೆಗೂ ನಾನು ಯಶಸ್ವಿಯಾಗಿದ್ದೇನೆ. ನನಗೆ ಸಂತೋಷವಾಗುತಿದೆ. ನನಗೆ ಸಾಯಲು ಭಯವಿಲ್ಲ. ನನ್ನ ದೇಶಕ್ಕಾಗಿ ಮಡಿಯುತಿದ್ದೇನೆ. ನನ್ನ ದೇಶದ ಜನರು ಬ್ರಿಟೀಷರ ಆಳ್ವಿಕೆಯಡಿಯಲ್ಲಿ ನೋವನುಭವಿಸುತಿರುವುದನು ನಾನು ನೋಡಿದ್ದೇನೆ. ನನ್ನ ಕರ್ತವ್ಯ ನಾನು ಮಾಡಿದ್ದೇನೆ. ತಾಯ್ನಾಡಿಗಾಗಿ ಪ್ರಾಣತ್ಯಾಗ ಮಾಡುವುದಕ್ಕಿಂತ ಹೆಚ್ಚಿನ ಗೌರವ ನನಗೆ ಬೇರೆ ಯಾವುದರಿಂದಲೂ ಸಿಗುವುದಿಲ್ಲ" ಎಂದು ಹೇಳಿದರು.
ಉಧಾಮ್ ಸಿಂಗ್ ಅವರನ್ನು ೧೯೪೦, ಜುಲೈ ೩೧ರಂದು ಓ'ಡ್ವಯಾರ್ ನ ಹತ್ಯೆಯ ಆರೋಪದ ಮೇಲೆ ಗಲ್ಲಿಗೇರಿಸಲಾಯಿತು. ಉಧಾಮ್ ಸಿಂಗ್ ಅವರ ಕಾರ್ಯಕ್ಕೆ ಎರಡೂ ರೀತಿಯಾದ ಪ್ರತಿಕ್ರಿಯೆಗಳು ಬಂದಿದ್ದವು. ಪ್ರಶಂಸೆಯ ಜೊತೆಗೆ ಖಂಡನೆಯೂ. ಗಾಂಧಿ, ನೆಹರು ಹಾಗೂ ಮತ್ತಿತ್ತರ ಅಹಿಂಸವಾದಿಗಳು ಒಳಗೊಂಡಂತೆ, ಉಧಾಮ್ ಸಿಂಗ್ ಅವರ ಕೃತ್ಯವನ್ನು 'ವಿವೇಚನಾ ರಹಿತ' ಎಂದು ಖಂಡಿಸಿದರು.
ಆದರೆ ೧೯೫೨ರಲ್ಲಿ ನೆಹರು, "ನಮ್ಮೆಲ್ಲರನು ಸ್ವತಂತ್ರ್ಯ ಭಾರತದಲ್ಲಿ ನಲಿಯಲೆಂದು ಮೃತ್ಯು ಬಾಗಿಲನ್ನು ತಟ್ಟಿದ ಶಾಹಿದ್-ಇ-ಆಜೀಮ್ ಉಧಾಮ್ ಸಿಂಗ್ ಅವರನ್ನು ಗೌರವದಿಂದ ನಮಿಸುತ್ತೇನೆ" ಎಂದು ಪ್ರಶಂಸಿದರು!?
ಏನೇ ಆಗಲಿ ಇಂದಿಗೆ ಈ ಘೋರ ಕೃತ್ಯ ನಡೆದು ೯೨ ವರುಶವಾಗಿದೆ. ಸ್ವತಂತ್ರ್ಯ ಸಂಗ್ರಾಮದಲ್ಲಿ ಹೋರಡಿದ, ಹೆಸರೂ ತಿಳಿಯದ ಸ್ವತಂತ್ರ್ಯ ಹೋರಾಟಗಾರರಿಗೆ, ಇಂತಹ ದುರಂತಗಳಲಿ ಸಾವಿಗೀಡಾದ ಅಮಾಯಕರಿಗೆ ಶ್ರದ್ಧಾಂಜಲಿ ಅರ್ಪಿಸುತ್ತ ಅವರು ಶ್ರಮಿಸಿ ನೀಡಿರುವ ನಮ್ಮ ಈ ಸ್ವತಂತ್ರ್ಯ ದೇಶವು ಮತ್ತೆ ಇಂತಹ ಕ್ರೂರಿಗಳ ಕಾಣದಂತೆ ಕಾಪಾಡುವ ಬನ್ನಿ. . . . .